ಬಾಕೂ
ಸೋವಿಯತ್ ಸಮಾಜವಾದಿ ಗಣರಾಜ್ಯದ ಅಜರ್‍ಬೈಜಾನ್ ರಾಜ್ಯದ ರಾಜಧಾನಿ. ಬಾಕೂ ಕೊಲ್ಲಿಯಲ್ಲಿರುವ ಬಂದರು ಕ್ಯಾಸ್ಪಿಯನ್ ಸಮುದ್ರದ ಪಶ್ಚಿಮ ದಂಡೆಯ ಅಪ್ಸರಾನ್ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ. ಬಾಕೂ ಕೊಲ್ಲಿಯ ದ್ವೀಪಸ್ತೋಮಗಳು ಮತ್ತು ಅಪ್ಸರಾನ್ ಪರ್ಯಾಯ ದ್ವೀಪಗಳು ಬಾಕೂ ನಗರವನ್ನು ಶೀತ ಮಾರುತಗಳಿಂದ ರಕ್ಷಿಸುತ್ತವೆ. ಇಲ್ಲಿ ಗಂಟೆಗೆ ಸುಮಾರು 65 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಗೆ ಈ ನಗರ ಆಗಾಗ ಪಕ್ಕಾಗುವುದುಂಟು. ಅದಕ್ಕಾಗಿ ಈ ನಗರವನ್ನು ಬಾಕೂ (ವಾಯುನಗರ) ಎಂದು ಕರೆದರು. ಬಾಕೂ ನಗರ ಜನಸಂಖ್ಯೆ 8,70,000, ಮಹಾನಗರದ ಜನಸಂಖ್ಯೆ 1,292,000 (1975).

ಕ್ಯಾಸ್ಪಿಯನ್ ಸಮುದ್ರ ತೀರದ ಬಾಕೂ ಪ್ರದೇಶದಲ್ಲಿ ಹಿಂದೆ ಮನುಷ್ಯರ ವಾಸ ಇದ್ದಿತೆಂಬುದಕ್ಕೆ ಪುರಾವಸ್ತು ಸಾಕ್ಷ್ಯಗಳಿವೆ. ಆದರೆ ಬಾಕೂ ಪಟ್ಟಣದ ಬಗ್ಗೆ ಐತಿಹಾಸಿಕ ಉಲ್ಲೇಖಗಳು ದೊರಕುವುದು ಕ್ರಿ.ಶ. 885ರ ತರುವಾಯ. ಕ್ರಿ.ಶ. 11ನೆಯ ಶತಮಾನದಲ್ಲಿ ಬಾಕೂ ಷೀರ್ವಾನ್ ಷಾ ಸಂತತಿಯ ಅರಸರ ವಶವಾಗಿ, 12ನೆಯ ಶತಮಾನದಲ್ಲಿ ಅವರ ರಾಜಧಾನಿಯಾಯಿತು. 13 ಮತ್ತು 14ನೆಯ ಶತಮಾನಗಳಲ್ಲಿ ಮಂಗೋಲರ ವಶದಲ್ಲಿದ್ದು 1723ರಲ್ಲಿ ರಷ್ಯದ ಸಾಮ್ರಾಟ 1ನೆಯ ಪೀಟರನ ಸ್ವಾಧೀನವಾಯಿತು. 1735ರಲ್ಲಿ ಅದನ್ನು ಪರ್ಶಿಯಾ ದೇಶಕ್ಕೆ ಒಪ್ಪಿಸಲಾಯಿತು. ಕೊನೆಗೆ 1806ರಲ್ಲಿ ಬಾಕೂ ರಷ್ಯಕ್ಕೆ ಸೇರಿಹೋಗಿ 1920ರಲ್ಲಿ ರಷ್ಯಾ ರಾಷ್ಟ್ರದ ಅಂಗವಾದ ಅಜûರ್‍ಬೈಜಾನ್ ಗಣರಾಜ್ಯದ ರಾಜಧಾನಿಯಾಯಿತು.

ಕೋಟೆಕೊತ್ತಲಗಳಿಂದ ಅವರಿಸಲ್ಪಟ್ಟ ಇಚೇರಿಶೇಖರ್ ಎಂಬುದು ಬಾಕೂ ನಗರದ ಹಳೆಯ ಭಾಗ. 1806ರಲ್ಲಿ ರಷ್ಯಾ ಈ ನಗರವನ್ನು ಆಕ್ರಮಿಸಿಕೊಂಡು ಸುತ್ತಲೂ ಕೋಟೆ ಕಟ್ಟಿತು. ಕೋಟೆಯ ಭಾಗದಲ್ಲಿ ಕುಜ್-ಕಲಾಸಿ ಎಂಬ ಗೋಪುರ ಉಂಟು. ಇಕ್ಕಟ್ಟಾದ ಓಣಿಗಳು ಹಾಗೂ ಪ್ರಾಚೀನ ಶೈಲಿಯ ಕಟ್ಟಡಗಳಿಂದ ಕೂಡಿರುವ ಹಳೆಯ ನಗರ ಆಕರ್ಷಣೀಯವಾಗಿದೆ. ಅಲ್ಲಿಯ ಷೀರ್ವಾನ್ ಷಾ ರಾಜಮನೆತನದ ಅರಮನೆ ಈಗ ವಸ್ತುಪ್ರದರ್ಶನಾಲಯವಾಗಿದೆ. 1078-79ರಲ್ಲಿ ಕಟ್ಟಿದ ಮಸೀದಿ ಕೋಟೆಯ ಭಾಗದಲ್ಲಿದೆ. ಖಗೋಳ ವಿಜ್ಞಾನಿ ಸೈದಾ ಬಕೂವಿ ಎಂಬಾತನ ಸಮಾಧಿ ಈ ನಗರ ಭಾಗದಲ್ಲಿದೆ.

ಹಳೆಯ ಕೋಟೆ ಗೋಡೆಯ ಸುತ್ತ ಆಧುನಿಕ ಬಾಕೂ ನಗರದ ನಿರ್ಮಾಣವಾಗಿದೆ. ಬಾಕೂ ಬೃಹತ್ ಪ್ರದೇಶ 10 ಜಿಲ್ಲೆಗಳನ್ನೊಳಗೊಂಡಿದ್ದು ಇಡೀ ಅಪ್ಸರಾನ್ ಪರ್ಯಾಯ ದ್ವೀಪವನ್ನು ಆಕ್ರಮಿಸಿಕೊಂಡಿದೆ. ಬಾಕೂ ಮಹಾನಗರ 46 ಬಡಾವಣೆಗಳಿಂದ ಕೂಡಿದೆ. ನಗರದ ಪೂರ್ವ ಭಾಗ ಕೈಗಾರಿಕೆಯ ಕೇಂದ್ರ. ಆಡಳಿತ ಪಟ್ಟಣವಾಗಿ ಹೊಂದಿರುವ ಪ್ರಾಮುಖ್ಯ ಹಾಗೂ ಪೆಟ್ರೋಲ್ ಎಣ್ಣೆಯ ಕೈಗಾರಿಕೆಗಳಿಂದ ಬಾಕೂ ನಗರಕ್ಕೆ ರಷ್ಯಾದ ಮಹಾನಗರಗಳ ಪೈಕಿ ಐದನೆಯ ಸ್ಥಾನವಿದೆ.

ಎಂಟನೆಯ ಶತಮಾನದಿಂದಲೇ ಬಾಕೂ ಪ್ರದೇಶದಲ್ಲಿ ಸೀಮೆಎಣ್ಣೆಯ ಬಳಕೆ ಇತ್ತು. ದೀಪಕ್ಕೆ ಅಗತ್ಯವಾದ ಸೀಮೆಎಣ್ಣೆಯನ್ನು ಆಳವಿಲ್ಲದ ಬಾವಿಗಳಿಂದ ಪಡೆದುಕೊಳ್ಳುತ್ತಿದ್ದರು. 1872ರಿಂದ ಪೆಟ್ರೋಲಿನ ತಯಾರಿಕೆ ಪ್ರಾರಂಭವಾಯಿತು. 20ನೆಯ ಶತಮಾನದ ಪ್ರಾರಂಭದಲ್ಲಿ ಪೆಟ್ರೋಲ್ ಉತ್ಟಾದನೆಯ ಪ್ರದೇಶಗಳ ಪೈಕಿ ಬಾಕೂ ಪ್ರಮುಖವಾದುದೆಂದು ಭಾವಿಸಲಾಗಿತ್ತು. ಸ್ಥಳೀಯವಾಗಿ ಶುದ್ಧೀಕರಿಸಿದ ಎಣ್ಣೆಯನ್ನು ಬಾಕೂ ನಗರದಿಂದ ಕಪ್ಪು ಸಮುದ್ರದ ಪೂರ್ವದ ಅಂಚಿನಲ್ಲಿರುವ ಬಟ್ಯೂಮಿ ಪಟ್ಟಣಕ್ಕೆ ಭಾರಿ ಕೊಳವೆಗಳಲ್ಲಿ ರವಾನಿಸುತ್ತಾರೆ. ಹಡಗು ನಿರ್ಮಾಣ ಹಾಗೂ ವಿದ್ಯುತ್ ಉಪಕರಣಗಳು ಬಟ್ಟೆ ಪಾದರಕ್ಷೆ ಮೊದಲಾದವುಗಳ ತಯಾರಿಕೆಗೆ ಬಾಕೂ ನಗರದ ಇತರ ಕೈಗಾರಿಕೆಗಳು.

ಬಾಕೂ ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕೇಂದ್ರ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿವೆ. ಅಜûರ್‍ಬೈಜಾನ್ ವೈಜ್ಞಾನಿಕ ಸಂಶೋಧನಾ ಅಕಾಡೆಮಿ ಇದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ